ಪಾಲ್ಮೈರ - 
ಸಿರಿಯದ ಮರಳ್ಗಾಡಿನಲ್ಲಿ ಯುಫ್ರೇಟಿಸ್ ನದಿಯ ಪಶ್ಚಿಮದಲ್ಲಿ ಡಮಾಸ್ಕಸಿನಿಂದ ಈಶಾನ್ಯಕ್ಕೆ 216 ಕಿ.ಮೀ. ದೂರದಲ್ಲಿರುವ ಪ್ರಾಚೀನ ಕಾಲದಲ್ಲಿ ಟ್ಯಾಡ್ಮಾರ್ ಎಂದು ಪ್ರಸಿದ್ಧವಾಗಿದ್ದ ನಗರ. ಪಾಲ್ಮೈರ ಎಂಬುದು ಲ್ಯಾಟಿನ್ ಹೆಸರು. ಕ್ರಿ.ಪೂ. 19 ನೆಯ ಶತಮಾನದ ಕ್ಯಾಪಡೋಷಿಯಾದಲ್ಲಿ ಸಿಕ್ಕಿರುವ ಅಸ್ಸಿರಿಯನರ ಬರಹಗಳಲ್ಲಿ ಮೊದಲ ಬಾರಿಗೆ ಇದರ ಉಲ್ಲೇಖವಿದೆ. ಕ್ರಿ.ಪೂ. 18 ನೆಯ ಶತಮಾನದ ಮಾರಿ ಫಲಕಗಳಲ್ಲಿ ಅಲ್ಲಿಯ ಜನರ ಬಗ್ಗೆ ಉಲ್ಲೇಖವಿದೆ. 11 ನೆಯ ಶತಮಾನದಲ್ಲಿ ಅಸ್ಸಿರಿಯನ್ ಚಕ್ರವರ್ತಿ 1ನೆಯ ಟೈಗ್ಲಾಸ್-ಪೈಲೀಸರ್ ಪಾಲ್ಮೈರದಲ್ಲಿ ವಾಸವಾಗಿದ್ದ ಅರಮೆನಿಯನರನ್ನು ಸೋಲಿಸುದುದಾಗಿ ತಿಳಿದುಬಂದಿದೆ. ಕ್ರಿ.ಪೂ. 10 ನೆಯ ಶತಮಾನದಲ್ಲಿ ಯಹೂದಿಗಳ ದೊರೆ ಸಾಲೊಮನ್ ಇಲ್ಲಿ ಕೆಲವು ಕಟ್ಟಡಗಳನ್ನು ನಿರ್ಮಿಸಿದನೆಂದು ಹೇಳಲಾಗಿದ್ದರೂ ಅವನ ಅನಂತರ ಬಂದವರು ಸಾಲೊಮನ್ನನ ರಾಜ್ಯ ವಿಸ್ತಾರವನ್ನು ತಿಳಿಸುವ ಪ್ರಯತ್ನದಲ್ಲಿ ಈ ರೀತಿ ತಪ್ಪು ನಿರೂಪಣೆ ಮಾಡಿದರೆಂದು ಹೇಳಲಾಗಿದೆ. ಕ್ರಿ. ಪೂ. 3 ನೆಯ ಶತಮಾನದಲ್ಲಿ ಸಿಲ್ಯೂಸಿಡ್ ಗ್ರೀಕರು ಈ ಪ್ರದೇಶವನ್ನು ಗೆದ್ದುಕೊಂಡು ಪೌರಸ್ತ್ಯ ದೇಶಗಳೊಂದಿಗೆ ನಡೆಸುತ್ತಿದ್ದ ವ್ಯಾಪಾರದ ಹೆದ್ದಾರಿಯನ್ನು ಪಾಲ್ಮೈರ ಮೂಲಕ ನಿರ್ಮಿಸಿದರು. ಪರ್ಷಿಯನ್ ಖಾರಿಯ ಮಾರ್ಗವಾಗಿ ಪೌರಸ್ತ್ಯ ದೇಶಗಳೊಂದಿಗೆ ನಡೆಯುತ್ತಿದ್ದ ವ್ಯಾಪಾರದಿಂದಾಗಿ ಪಾಲ್ಮೈರದ ಐಶ್ವರ್ಯ ವೃದ್ಧಿಯಾಯಿತು. ಇಲ್ಲಿ ಇದು ರೋಮನ್ ಚಕ್ರಾಧಿಪತ್ಯದಲ್ಲಿ ಸೇರಿದ ಮೇಲೆ ಪೌರಸ್ತ್ಯ ದೇಶಗಳೊಂದಿಗೆ ಪಾಲ್ಮೈರ, ಯುಫ್ರೇಟಿಸ್-ಟೈಗ್ರಿಸ್ ನದಿಗಳು ಮತ್ತು ಪರ್ಷಿಯ ಖಾರಿಯ ಮೂಲಕ ಇದರ ವ್ಯಾಪಾರ ನಡೆಯುತ್ತಿತ್ತು. ಪಾಲ್ಮೈರದ ವರ್ತಕರು ಭಾರತದಿಂದ ಭೋಗ ವಸ್ತುಗಳನ್ನೂ ಚೀನಾದಿಂದ ರೇಷ್ಮೆ ಬಟ್ಟೆಗಳನ್ನು ಅರೇಬಿಯಾದಿಂದ ಚಿನ್ನಾಭರಣಗಳಲ್ಲಿ ಬಳಸುವ ಬೆಲೆಬಾಳುವ ಕಲ್ಲುಗಳು, ಉತ್ತಮ ವಸ್ತುಗಳು ಮತ್ತು ಸುಗಂಧ ದ್ರವ್ಯಗಳನ್ನೂ ಕೊಂಡು ಹೇಸರಕತ್ತೆ ಮತ್ತು ಒಂಟೆಗಳ ಮೇಲೆ ಪಾಶ್ಚಾತ್ಯ ದೇಶಗಳಿಗೆ ಸಾಗಿಸುತ್ತಿದ್ದರು. ಟೈರ್ ನಗರದ ಪ್ರಸಿದ್ಧ ಉಣ್ಣೆ ವಸ್ತ್ರ್ರಗಳು, ಉತ್ತಮವಾದ ಗಾಜಿನ ವಸ್ತುಗಳು ಮತ್ತು ಸಿರಿಯದ ಮದ್ಯಗಳನ್ನು ಪೌರಸ್ತ್ಯ ದೇಶಗಳಿಗೆ ಒದಗಿಸುತ್ತಿದ್ದರು. ಪಾಲ್ಮೈರದ ಸ್ಥಳೀಯ ಸರ್ಕಾರವೂ ರೋಮಿನ ಕೇಂದ್ರ ಸರ್ಕಾರವೂ ಈ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿ ತಮ್ಮ ಸಂಪತ್ತನ್ನು ಬೆಳೆಸಿಕೊಳ್ಳುತ್ತಿದ್ದವು.

ಪಾಲ್ಮೈರದ ವರ್ತಕರು ಪರ್ಷಿಯನ್ನರ ಮತ್ತು ರೋಮನ್ನರ ವ್ಯಾಪಾರದಲ್ಲಿ ಮಧ್ಯವರ್ತಿಗಳಾಗಿದ್ದರೆಂದು ಕ್ರಿ.ಶ. 1ನೆಯ ಶತಮಾನದಲ್ಲಿದ್ದ ಫ್ಲಿನಿ ಹೇಳಿದ್ದಾನೆ. ಪಾಲ್ಮೈರದ ಜನರು ಹಿಂದೆ ಸ್ವಾಯತ್ತೆ ಹೊಂದಿದ್ದರೆಂಬುದು ಅಲ್ಲಿಯ ಶಾಸನಗಳಿಂದ ತಿಳಿದುಬರುತ್ತದೆ. ಸಮಸ್ತ ನಾಗರಿಕರ ಸಭೆಯಲ್ಲಿ ನಾಯಕನ ಆಯ್ಕೆಯಾಗುತ್ತಿತ್ತು. ರೋಮಿನ ಚಕ್ರವರ್ತಿ ಟೈಬೀರಿಯಸ್ ಕ್ರಿ.ಶ. 17 ರಲ್ಲಿ ಈ ಪ್ರದೇಶವನ್ನು ತನ್ನ ನೇರ ಆಡಳಿತಕ್ಕೆ ತೆಗೆದುಕೊಂಡು ಜರ್ಮ್ಯಾನಿಕಸನನ್ನು ಇಲ್ಲಿ ಅಧಿಕಾರಿಯಾಗಿ ನೇಮಿಸಿದ. ಸಿರಿಯದ ರೋಮನ್ ಪ್ರಾಂತ್ಯಾಧಿಕಾರಿ ತನ್ನ ಪ್ರತಿನಿಧಿಯನ್ನು ಪಾಲ್ಮೈರಕ್ಕೆ ಕಳಿಸಿದ್ದ. ಕ್ರಿ.ಶ. 129ರಲ್ಲಿ ಪಾಲ್ಮೈರಕ್ಕೆ ಚಕ್ರವರ್ತಿ ಹೇಡ್ರಿಯನ್ ಭೇಟಿ ನೀಡಿದಾಗ ಈ ನಗರಕ್ಕೆ ಸ್ವಯಮಧಿಕಾರ ನೀಡಿ ಕೆಲವು ಸುಂಕಗಳಿಂದ ವಿನಾಯಿತಿ ನೀಡಿದುದಾಗಿ ತಿಳಿದುಬರುತ್ತದೆ. ಮುಂದಿನ ಶತಮಾನಗಳಲ್ಲಿ ಪಾಲ್ಮೈರದ ವ್ಯಾಪಾರ ವೃದ್ಧಿ ಹೊಂದಿತು.
ಪರ್ಷಿಯದ ಸ್ಯಾಸೇನಿಯನ್ ಚಕ್ರವರ್ತಿ 1ನೆಯ ಆರ್ದಷಿರ್ (ಅ.ಸು. 226-241) ಅಧಿಕಾರಕ್ಕೆ ಬಂದಾಗ ಪರ್ಷಿಯ ಖಾರಿಯ ವ್ಯಾಪಾರ ಮಾರ್ಗ ಪಾಲ್ಮೈರದ ವರ್ತಕರಿಗೆ ಮುಚ್ಚಿ ಹೋಯಿತು. ಆ ಸಮಯದಲ್ಲಿ ರೋಮನ್ ಚಕ್ರಾಧಿಪತ್ಯ ದುರ್ಬಲವಾಯಿತು. ಈ ಪರಿಸ್ಥಿತಿಯ ಲಾಭ ಪಡೆದು ಪಾಲ್ಮೈರದ ಜನ ಹೆಚ್ಚು ಕಡಿಮೆ ಸ್ವಾತಂತ್ರ್ಯ ಘೋಷಿಸಿಕೊಂಡರು. ವ್ಯಾಲೇರಿಯನ್ ಚಕ್ರವರ್ತಿಯಿಂದ ಸಿರಿಯದ ಪ್ರಾಂತ್ಯಾಧಿಕಾರಿಯಾಗಿ ನೇಮಿತನಾಗಿದ್ದ ಪಾಲ್ಮೈರದ ರಾಜ ಮನೆತನವೊಂದಕ್ಕೆ ಸೇರಿದ್ದ, ಓಡೆನಾಥಸ್ ಇದರ ಸ್ವಾತಂತ್ರ್ಯ ಇತಿಹಾಸದಲ್ಲಿ ಮುಖ್ಯ ಪಾತ್ರ ವಹಿಸಿದ. ಪರ್ಷಿಯದ ಚಕ್ರವರ್ತಿ 1 ನೆಯ ಷಾಪೂರ್ 260 ರಲ್ಲಿ ವ್ಯಾಲೆರಿಯನ್ ಚಕ್ರವರ್ತಿಯನ್ನು ಸೋಲಿಸಿ ಹಿಂದಿರುಗುತ್ತಿದ್ದಾಗ ಷಾಪೂರನ ಸೈನ್ಯವನ್ನು ಓಡೆನಾಥಸ್ ಎದುರಿಸಿ ಟೈಗ್ರಿಸ್ ನದೀ ತೀರದಲ್ಲಿದ್ದ ಅವನ ರಾಜಧಾನಿ ಟೆಸಿಫೋನ್‍ವರೆಗೂ ಅವನನ್ನು ಅಟ್ಟಿಸಿಕೊಂಡು ಹೋದ. ಓಡೆನಾಥಸ್ ತನ್ನ ಈ ಪರಾಕ್ರಮದ ಕುರುಹಾಗಿ ಪರ್ಷಿಯ ಚಕ್ರವರ್ತಿಯ ಬಿರುದಾದ ರಾಜಾಧಿರಾಜ ಎಂಬ ಅಬಿಧಾನವನ್ನು ಸ್ವತಃ ತಳೆದ. 267 ರಲ್ಲಿ ಓಡೆನಾಥಸ್ ಮತ್ತು ಅವನ ಹಿರಿಯ ಮಗ ಹಿರಾಡಿಯಾನಸ್ ಕೊಲೆಯಾದರು. ಅವನ ರಾಣಿ ಜಿóನೊಬಿಯ ತನ್ನ ಚಿಕ್ಕ ವಯಸ್ಸಿನ ಮಗ ವಬಲ್ಲಾಥಸನ ಪರವಾಗಿ, ಸ್ವತಃ ಅಧಿಕಾರ ವಹಿಸಿಕೊಂಡಳು. ಸಮರ್ಥಳೂ ಸುಂದರಿಯೂ ದಕ್ಷ ಆಡಳಿತಗಾರ್ತಿಯೂ ಆಗಿದ್ದ ಜಿóನೊಬಿಯ ಸ್ವಲ್ಪ ಕಾಲದ ಮೇಲೆ ರೋಮಿನ ಪರಮಾಧಿಕಾರವನ್ನು ಧಿಕ್ಕರಿಸಿ ತಾನೇ ಸಾಮ್ರಾಜ್ಞಿಯೆಂದು ಘೋಷಿಸಿಕೊಂಡಳು. ತನ್ನ ಹೆಸರಿನಲ್ಲಿ ನಾಣ್ಯಗಳನ್ನು ಅಚ್ಚು ಹಾಕಿಸಿಕೊಂಡಳು. ಈಜಿಪ್ಟನ್ನು ರೋಮನ್ನರಿಂದ ವಶಪಡಿಸಿಕೊಳ್ಳಲು ತನ್ನ ಸೈನ್ಯವನ್ನು ಕಳುಹಿಸಿ ಆ ಪ್ರಯತ್ನದಲ್ಲಿ ಜಯ ಗಳಿಸಿದಳು. 

ಆ ಮಧ್ಯೆ ರೋಮನ್ ಚಕ್ರವರ್ತಿ ಅರೀಲಿಯನ್ 272 ರಲ್ಲಿ ಜಿóನೊಬಿಯಳ ದಳಪತಿ ಜóಬ್ಡಾಸನ ಅಶ್ವದಳವನ್ನು ಆಂಟಿಯೋಕ್ ಮತ್ತು ಎಮೆಸ ಕದನಗಳಲ್ಲಿ ಸೋಲಿಸಿ ಪಾಲ್ಮೈರಕ್ಕೂ ಮುತ್ತಿಗೆ ಹಾಕಿದ. ಆಗ ದಾರಿ ಕಾಣದಾದ ಜಿóನೊಬಿಯ ಈಜಿಪ್ಟಿನಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕಾಯಿತು. ಕೊನೆಗೆ ಪಾಲ್ಮೈರದ ಪತನವಾದಾಗ ತಪ್ಪಿಸಿಕೊಂಡ ಜಿನೊಬಿಯ ಮತ್ತು ಅವಳ ಮಗ ವಹಬಲ್ಲಟ್ ಅನಧಿಕಾರದಲ್ಲೇ ಸೆರೆಯಾದರು. ಜಿನೊಬಿಯಳ ಬಂಧುವೊಬ್ಬನನ್ನು ಪಾಲ್ಮೈರದ ಅಧಿಕಾರಿಯಾಗಿ ನೇಮಿಸಲಾಯಿತು. ಮರುವರ್ಷ ಪಾಲ್ಮೈರದಲ್ಲಿ ದಂಗೆಯುಂಟಾದಾಗ ಅರೀಲಿಯನ್ ಮತ್ತೆ ಇಲ್ಲಿಗೆ ಬಂದು ದಂಗೆಯನ್ನಡಗಿಸಿದನಲ್ಲದೆ ನಗರವನ್ನು ಲೂಟಿ ಮಾಡಿ ಇದನ್ನು ಅಗ್ನಿಗೆ ಆಹುತಿಯಾಗಿ ಮಾಡಿದ. 274 ರಲ್ಲಿ ಈ ವಿಜಯೋತ್ಸವವನ್ನಾಚರಿಸಿದಾಗ ತನ್ನ ಮಕ್ಕಳಾದ ಹೆರೆನಿಯಾನಸ್ ಮತ್ತು ಟೆಮೊಲಾಸರೊಂದಿಗೆ ಜಿóನೊಬಿಯ ಅದರಲ್ಲಿ ಭಾಗವಹಿಸಿದಳೆಂದು ಹೇಳಲಾಗಿದೆ. ತದನಂತರ ಪಾಲ್ಮೈರದ ಪ್ರಾಮುಖ್ಯ ತಗ್ಗಿತು.

ರೋಮನ್ ಚಕ್ರವರ್ತಿ ಡಯೋಕ್ಲೀಷಿಯನ್ನನ ಕಾಲದಲ್ಲಿ ನಗರದ ಸುತ್ತ ಬಲವಾದ ಕೋಟೆಯನ್ನು ನಿರ್ಮಿಸಲಾಯಿತು. ಮತ್ತೆ ಇದು ಕ್ರೈಸ್ತ ಧರ್ಮದ ಕೇಂದ್ರವಾಗಿ ಪ್ರಾಮುಖ್ಯ ಗಳಿಸಿತು. ಈ ನಗರದ ಬಿಷಪ್ ಮಾರಿನಸ್ 325 ರಲ್ಲಿ ನಿಸಿಯದ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ. 634 ರಲ್ಲಿ ಇದು ಬಾಗ್ದಾದಿನ ಖಲೀಫನ ವಶವಾಯಿತು. ಈಗ ಸುಮಾರು 12.000 ಜನಸಂಖ್ಯೆಯಿಂದ ಕೂಡಿರುವ ಈ ಪಟ್ಟಣ ಪೆಟ್ರೋಲ್ ಸಾಗಣೆಯ ಕೊಳವೆ ಮಾರ್ಗದಲ್ಲಿ ಒಂದು ಮುಖ್ಯ ನಿಲ್ದಾಣವಾಗಿದೆ. 

ಮೊದಲಿಗೆ ಸಮಿಟಿಕ್ ಜನಾಂಗದ ಕೇಂದ್ರವಾಗಿದ್ದ ಪಾಲ್ಮೈರ ಕ್ರಿ.ಪೂ. 4-3 ನೆಯ ಶತಮಾನಗಳಲ್ಲಿ ಗ್ರೀಕ್-ರೋಮನ್ ಜನರನ್ನಲ್ಲದೆ ಅರಮೆನಿಯನರನ್ನೂ ಒಳಗೊಂಡಿತ್ತು. ಕ್ರಿಸ್ತಶಕದ ಪ್ರಾರಂಭ ಕಾಲಕ್ಕೆ ಸಂಬಂಧಿಸಿದ ಶಾಸನಗಳಿಂದ ಜುಡಿಯ ಅರಮೇಯಿಕ್ ಭಾಷೆ ಇಲ್ಲಿ ಪ್ರಬಲವಾಗಿತ್ತೆಂದು ತಿಳಿದುಬರುತ್ತದೆ. ಅರಮೇಯಿಕ್ ಭಾಷೆಯ ಎರಡು ರೂಪಾಂತರಗಳ ಜೊತೆಗೆ ಗ್ರೀಕ್ ಭಾಷೆ ಸಾಹಿತ್ಯಿಕ ಭಾಷೆಯಾಗಿತ್ತು. ಲ್ಯಾಟಿನ್ ಸಹ ಬಳಕೆಯಲ್ಲಿತ್ತು. ಪಾಲ್ಮೈರೊ ವರ್ತಕರು ಭಾರತ (ಸ್ಕಿಥಿಯ), ಪರ್ಷಿಯ (ಪಾರ್ಥಿಯ), ಬ್ಯಾಬಿಲಾನ್, ಬಾಸ್ರಾ, ಮಧ್ಯ ಏಷ್ಯ, ಈಜಿಪ್ಟ್, ಏಡ್ರಿಯಾನ, ಡುರಾ-ಯೂರೋಪಸ್ ಮುಂತಾದ ಪ್ರದೇಶಗಳಲ್ಲೂ ತಮ್ಮ ಪ್ರಭಾವ ಹರಡಿದ್ದರು. 

ಪಾಲ್ಮೈರದ ಕಟ್ಟಡಗಳ ಪೈಕಿ ಬಾಲ್ ದೇವತೆಯ ಮಂದಿರ, ರಾಜಮಾರ್ಗದಲ್ಲಿದ್ದ ಕಂಬಗಳಿಂದ ಕೂಡಿದ ಮೊಗಸಾಲೆ, ಅದರ ಆಕರ್ಷಕ ಕಮಾನು ಮತ್ತು ಗೋಪುರ ಸಮಾಧಿಗಳು ಗಮನಾರ್ಹ. ಬಾಲ್ ಮಂದಿರ 50 ಚ.ಗ. ವಿಸ್ತಾರವಾದ ಒಳಾಂಗಣದಲ್ಲಿದೆ. ಅದರ ಉತ್ತರ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಕಾರಿಂತಿಯನ್ ಶೈಲಿಯ ಕಂಬಗಳಿಂದ ಕೂಡಿದ ವರಾಂಡಗಳೂ ಪಶ್ಚಿಮದಲ್ಲಿ ವಿಶಾಲ ಸೋಪಾನಗಳಿಂದ ಕೂಡಿದೆ. ಮುಖಮಂಟಪವೂ ಇದೆ. ಉತ್ತರ ಮತ್ತು ದಕ್ಷಿಣ ಪಾಶ್ರ್ವಗಳಲ್ಲಿ ಎರಡು ಗರ್ಭಗುಡಿಗಳಿವೆ. ಮಾಳಿಗೆಯ ಮೇಲೂ ಪ್ರಜಾಸ್ಥಾನಗಳಿದ್ದಿರಬಹುದು. ರಾಜಮಾರ್ಗದ ಕಂಬಗಳ ಮೇಲಿನ ಕಮಾನುಗಳ ಮೇಲೆ ಪ್ರಮುಖ ವ್ಯಕ್ತಿಗಳ ಕಂಚಿನ ಪ್ರತಿಮೆಗಳಿದ್ದುವು. ರಾಜಮಾರ್ಗದ ಪೂರ್ವದ ತುದಿಯಲ್ಲಿದ್ದ ದೊಡ್ಡ ಕಮಾನು ಈಗಲೂ ಉಳಿದಿದೆ. ಗೋಪುರ ಸಮಾಧಿಗಳಲ್ಲಿದ್ದ ಗೂಡುಗಳಲ್ಲಿ ಒಂದೊಂದರಲ್ಲೂ ಆಯಾ ಗೋಪುರದ ಒಡೆಯರ ಕುಟುಂಬಕ್ಕೆ ಸೇರಿದವರ ಶವಗಳನ್ನು ಇಟ್ಟು ಮುಚ್ಚುತ್ತಿದ್ದರು. ಶವಗಳೊಂದಿಗೆ ಮೃತರ ಭಾವಚಿತ್ರಗಳನ್ನಿರಿಸಲಾಗುತ್ತಿತ್ತು. ಅಂಥ ಅನೇಕ ಭಾವಚಿತ್ರಗಳು ದೊರೆತಿವೆ. ಪಾಲ್ಮೈರದ ಜನತೆಯ ಚಿತ್ರಕಲಾ ವೈಶಿಷ್ಟ್ಯವನ್ನು ತಿಳಿಯಲು ಈ ಭಾವಚಿತ್ರಗಳು ಸಹಾಯಕವಾಗಿವೆ. ಭಾವಚಿತ್ರಗಳ ಬುಡದಲ್ಲಿ ಅರಮೇಯಿಕ್ ಭಾಷೆಯ ಲಿಖಿತ ಶಾಸನಗಳಿವೆ.
	          (ಬಿ.ಕೆ.ಜಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ